Saturday, 17 June 2023

ಮಿತ್ತಬೈಲ್ ಹಾಜಾರ್(ನ.ಮ)

ಮಿತ್ತಬೈಲ್ ಹಾಜಾರ್ ಎಂದು ಸುಪರಿಚಿತರಾಗಿದ್ದ *ಶೈಖುನಾ ಹಾಜಿ ಕೆ ಅಬ್ದುಲ್ಲಾಹ್ ಮುಸ್ಲಿಯಾರ್ (ನ. ಮ)*  ರವರು ನಮ್ಮನ್ನಗಲಿ 19 ವರ್ಷಗಳಾದವು.  ರಬೀಉಲ್ ಆಖಿರ್ 15, 1423(2003, ಜೂನ್ 16) ರಲ್ಲಾಗಿತ್ತು ಮರಣ ಹೊಂದಿರುವುದು.

ಹಲವಾರು ಮಹಾನುಭಾವರನ್ನು ಅನುಸ್ಮರಿಸುವ ಈ ತಿಂಗಳಲ್ಲಿ ಶೈಖುನಾ ಅಬ್ದುಲ್ಲಾಹ್ ಹಾಜಿ(ನ. ಮ) ರವರ ಅನುಸ್ಮರಣೆ ಕೂಡ ಒಂದು. 

ಮಿತ್ತಬೈಲ್ ಜುಮಾ ಮಸೀದಿಯಲ್ಲಿ ಸುಮಾರು 40 ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿದ ಶೈಖುನಾರವರು ತನ್ನ ಹುಟ್ಟೂರಾದ ಕಟ್ಟತ್ತಿಲ ಎಂಬ ಗ್ರಾಮದಿಂದ ಮಿತ್ತಬೈಲ್ ಗೆ ಆಗಮಿಸುವಾಗ, ಅಲ್ಲಿನ ಜನರಿಗೆ ಇಸ್ಲಾಮೀ ಪರವಾದ  ವಿಜ್ಞಾನದ ಕೊರತೆಯಿತ್ತು. ಮಸೀದಿಯು ಹಲವಾರು ಕೊರತೆಗಳಿಂದ ಕೂಡಿದ್ದು ಸುಸಜ್ಜಿತವಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಅವರು ಮಸೀದಿಯ ಜೀರ್ಣೋದ್ದಾರ ಕಾರ್ಯದಲ್ಲಿ ತಮ್ಮಿಂದಾದ ಸೇವೆಯನ್ನು ಮಾಡಿ ಅದರಲ್ಲಿ ಯಶಸ್ಸು ಕಂಡರು.

ಸಾವಿರಾರು ಜನರನ್ನು ಆಧ್ಯಾತ್ಮಿಕ ಪ್ರಕಾಶದೆಡೆಗೆ ಮುನ್ನಡೆಸಲು ಸಕಲ ಕಷ್ಟ ಕಾರ್ಪಣ್ಯಗಳನ್ನು ಸಹಿಸಿ ಜನರ ಆರೋಪಗಳಿಗೆ ಕಿವಿಗೊಡದೆ  ಮರಣದವರೆಗೂ ತನ್ನ ಸೇವೆಯನ್ನು ಸಲ್ಲಿಸಿದರು. 

ಸಾಮೂಹಿಕ, ಸಾಮಾಜಿಕ ಹಾಗೂ  ಮತ ಸೌಹಾರ್ದ  ಶಾಂತಿಯ  ರಂಗದಲ್ಲಿಯೂ ತನ್ನನ್ನು ಭೇಟಿಯಾದವರಿಗೆ ತನ್ನ ಸದ್ಗುಣ ಸ್ವಭಾವದಿಂದ ಜನರ ಸಮಸ್ಯೆಗಳಿಗೆ ತಕ್ಕ ಪರಿಹಾರ ನೀಡಿ ಮನ ತೃಪ್ತಿಯೊಂದಿಗೆ ಹಿಂತಿರುಗುವಂತೆ ಮಾಡುತ್ತಿದ್ದರು. ತನ್ನ *ಅಸ್ಮಾಹ್* ಚಿಕಿತ್ಸೆಯಿಂದ ಮಾರಕವ್ಯಾದಿ  ರೋಗಗಳ ನಿವಾರಣೆಯಾಗುವಂತೆ ಮಾಡುತ್ತಿದ್ದ ಶೈಖುನಾ, ಯಾವುದೇ ಸಂಘಟನೆ ಹಾಗೂ ಸಂಪತ್ತಿಗೆ ತಲೆಬಾಗದೆ ಜನಹೃದಯದಲ್ಲಿ ಮೆಚ್ಚುಗೆಯನ್ನು  ಪಡೆದಿದ್ದರು. 

ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಿ ಜನರನ್ನು ದೀನಿನ ನಿಯಮಗಳನ್ನು ಅನುಸರಿಸಿ ಜೀವಿಸುವಂತೆ ಮಾಡಲು ಹಲವಾರು ಪ್ರಭಾಷಣಗಳನ್ನು,  ಕ್ಲಾಸ್ಗಳನ್ನೂ,  ನಡೆಸಿದರಲ್ಲದೆ, ಹಲವಾರು ಗ್ರಂಥಗಳ  ದರ್ಸ್ ನಡೆಸಿಯೂ ಸರಿಯಾದ ದಾರಿಯನ್ನು ತೋರಿಸಿಕೊಟ್ಟರು. 

*ಶೈಖುನಾ ಮಿತ್ತಬೈಲ್ ಅಬ್ದುಲ್ ಜಬ್ಬಾರ್  ಉಸ್ತಾದರನ್ನು* ಮುದರ್ರಿಸರಾಗಿ ನೇಮಕಮಾಡುವ ಮೂಲಕ ಸುಪ್ರಸಿದ್ದ ದರ್ಸ್ ನ್ನು ಮಿತ್ತಬೈಲ್ ನಲ್ಲಿ  ಆರಂಭಿಸುವಲ್ಲಿ ಶೈಖುನಾ ರವರ  ಪಾತ್ರವು ಅಪಾರವಾಗಿತ್ತು.  

ಮಿತ್ತಬೈಲ್ ದರ್ಸ್ ನ್ನು,  ಶೈಖುನಾರವರು ಅಪಾರವಾಗಿ ಗೌರವಿಸುತ್ತಿದ್ದ ತನ್ನ ಮಾವನವರು ಕೂಡ ಆಗಿರುವ , ಅಲ್ಲಾಹನ ಆರಿಫ್ ಗಳಲ್ಲೊಬ್ಬರಾದ *ಅಲ್ ಹಾಜ್ ಶೈಖುನಾ ವಿ.ಕೆ. ಅಡ್ಯಾರ್ ಕಣ್ಣೂರ್ ಮುಹಮ್ಮದ್ ಮುಸ್ಲಿಯಾರ್(ಖ. ಸಿ)* ರವರು ಸುಪ್ರಸಿದ್ದ ಫತ್ಹುಲ್ ಮುಈನ್ ಎಂಬ ಗ್ರಂಥವನ್ನು ಹೇಳಿ ಕೊಡುವ ಮೂಲಕ ಆರಂಭಿಸಿದ್ದರು.  ಅಂದಿನಿಂದ ಮಿತ್ತಬೈಲ್ ಎಂಬ ಊರು  ಮತ್ತಷ್ಟು ಪ್ರಸಿದ್ಧವಾಗತೊಡಗಿತು.

ಶೈಖುನಾ ಅಬ್ದುಲ್ಲಾಹ್ ಹಾಜಿ ಯವರು ಮಿತ್ತಬೈಲ್ ಜುಮಾ ಮಸೀದಿಯ ವಠಾರದಲ್ಲಿ ಅಂತ್ಯ ವಿಶ್ರಮ ಗೊಳ್ಳುತ್ತಿರುವ *ವಲಿಯುಲ್ಲಾಹಿ ಶೈಖ್(ಖ.ಸಿ)* ರವರ ಉರೂಸಿನ ಸಂದರ್ಭದಲ್ಲಿ ಅವರ  ಕರಾಮತ್ತೊಂದನ್ನು ವಿವರಿಸುತ್ತಾ  "ಅಲ್ಲಾಹನ ಔಲಿಯಾಗಳು ಮರಣ ಹೊಂದಿದ್ದರೂ ಅವರ ಕರಾಮತುಗಳು ಕೊನೆಕೊಳ್ಳುವುದಿಲ್ಲ ಎಂಬುದಕ್ಕೆ ತನ್ನ ಸ್ವಂತ ಅನುಭವವೊಂದನ್ನು ವಿವರಿಸಿದ್ದರು.  ಶೈಖುನಾರವರು ಮಿತ್ತಬೈಲ್ ನಲ್ಲಿ ಖತೀಬ್ ಸೇವೆ ಆರಂಭಿಸಿದ ಕಾಲದಲ್ಲಿ, ದರ್ಗಾ ಝಿಯಾರತ್ ಗೆ ಬರುವವರ ಅನುಕೂಲಕ್ಕಾಗಿ ಬ್ಲಾಕ್ ಬೋರ್ಡ್ ನಲ್ಲಿ ಯಾಸೀನ್ ಬರೆದಿಟ್ಟಿದ್ದರು.  ಕೈಬರಹದಲ್ಲಿ ಉಂಟಾದ ಲೋಪವೊಂದು ಶೈಖುನಾರವರ ಗಮನಕ್ಕೆ ಬಂದಿರಲಿಲ್ಲ.  ಅಂದು ರಾತ್ರಿ ಒಂದು ಅಪರಿಚಿತ ವ್ಯಕ್ತಿಯು ಸ್ವಪ್ನದಲ್ಲಿ ಬಂದು ಆ ಲೋಪವಿರುವ ಆಯತನ್ನು ಸೂಚಿಸಿ ಸರಿಪಡಿಸಲು ಹೇಳಿದರು. ತಾವು ಯಾರು ಎಂದು  ಶೈಖುನಾ ವಿಚಾರಿಸಿದಾಗ  'ತಾನು ಇಲ್ಲಿಯೇ ಮಕ್ಬರದಲ್ಲಿರುವ ವ್ಯಕ್ತಿ' ಎಂದಾಗ ಎಚ್ಚರಗೊಂಡ ಶೈಖುನಾ ತಕ್ಷಣವೇ  ತಾನು ಬರೆದಿರುವ ಆಯತನ್ನು ಕೂಲಂಕುಷವಾಗಿ ಗಮನಿಸಿದಾಗ  ಸ್ವಪ್ನದಲ್ಲಿ  ಸೂಚಿಸಿರುವ ಅದೇ ಅಯತ್ತಿನಲ್ಲಿ ಕೈ ಬರಹ ಲೋಪ ಸಂಭವಿಸಿರುವುದು ಖಚಿತವಾಯಿತು. ತಕ್ಷಣ ಅದನ್ನು ಸರಿಪಡಿಸಿ ಬರೆದರು.
ಹಲವಾರು ಉಲಮಾಗಳಲ್ಲಿ  ಸಂಪರ್ಕವಿದ್ದ ಶೈಖುನಾ ಅಬ್ದುಲ್ಲಾಹ್ ಹಾಜಿ ಯವರು *ತಾಜುಲ್ ಉಲಮಾ ಸಯ್ಯದ್ ಅಬ್ದುಲ್ ರಹ್ಮಾನ್  ಉಳ್ಳಾಲ ತಂಗಳ್(ಖ.ಸಿ) ರವರ ಪ್ರಧಾನ ಶಿಷ್ಯರಾಗಿದ್ದರು.* ಕೇರಳದಲ್ಲಿ ಕ್ರಿಶ್ಚಿಯನ್ ಮಿಶಿನರಿಗಳ ವಂಚನೆಗೊಳಗಾಗಿ ಹಲವಾರು ಮುಸ್ಲಿಮರು ಮತಾಂತರಗೊಂಡ ಸಂದರ್ಭದಲ್ಲಿ *ಶೈಖುನಾ ಶಂಸುಲ್ ಉಲಮಾ ಇ.ಕೆ.ಅಬೂಬಕ್ಕರ್  ಮುಸ್ಲಿಯಾರ್  (ಖ.ಸಿ)* ರವರು ಪಾದ್ರಿಗಳ ವಿರುದ್ಧ ನಡೆಸಿದ ಸುಪ್ರಸಿದ್ದ ಪ್ರಭಾಷಣವನ್ನು ಸಭೆಯಲ್ಲಿ  ಕುಳಿತು ಆಲಿಸಿದ ಶೈಖುನಾ,  ತನ್ನ ಶಿಷ್ಯರಿಗೆ ಆ ಅದ್ಬುತ  ಸಂವಾದದ  ಬಗ್ಗೆ ಹಾಗೂ  ಅದರ  ಅನಿವಾರ್ಯತೆಯು  ಆ ಸಂದರ್ಭದಲ್ಲಿ  ಎಷ್ಟು ಅಗತ್ಯವಾಗಿತ್ತು ಎಂಬುದರ ಕುರಿತು ಹಲವರಿಗೆ ವಿವರಿಸಿದ್ದರು. 

1944 ರಲ್ಲಿ,  ಕೆಲವು ಖಾದಿಯನಿಗಳು ಹಾಗು ಇನ್ನಿತರ  ನೂತನವಾದಿಗಳು ಕರ್ನಾಟಕದಲ್ಲಿ ಉಲಮಾಗಳ ಅಭಾವವನ್ನು ಕಂಡು ತಮ್ಮ ಆಧಿಪತ್ಯ ಸ್ಥಾಪಿಸಲು ಶ್ರಮಿಸಿದಾಗ, ಅವರ ಕುಫ್ರಿಯತ್ತಿನ ವಾದವನ್ನು  ಪರಾಜಯಗೊಳಿಸಲು  ಪಾಣೆಮಂಗಳೂರಿನ ಗುಡ್ಡೆಯಂಗಡಿಯಲ್ಲಿ ಅಂತ್ಯವಿಶ್ರಮಗೊಳ್ಳುತ್ತಿರುವ  *ಮರ್ಹೂಂ ಹಝರತ್ ಶೈಖ್ ಅಬ್ಬಾಸ್ ಮೌಲವಿ(ಖ.ಸಿ)* ರವರೊಡನೆ ಚರ್ಚೆ ನಡೆಸುವಂತೆ ಮನವಿ ಮಾಡಿದ್ದರು. ರಾತ್ರಿಯಿಂದ  ಸುಬ್ಹ್ ಬಾಂಗ್ ನ ವರೆಗೂ  ಚರ್ಚೆ ನಡೆಸಿ ಪರಾಜಿತರಾದ ಖಾದಿಯನಿಗಳು, ಮಂಜೇಶ್ವರದ  ಉದ್ಯಾವರಕ್ಕೆ  ತೆರಳಿ ಫಿತ್ನ ನಡೆಸಿದಾಗ, ಅಲ್ಲಿನ ಪ್ರಮುಖ ವ್ಯಕ್ತಿಯಾದ  ಉದ್ಯಾವರ ಕಜಯಿಲ್ ಮುಹಮ್ಮದ್ ಎಂಬವರಿಗೆ ಈ ಮೊದಲು ಪಾಣೆಮಂಗಳೂರಿನಲ್ಲಿ ಚರ್ಚಿಸಿದ ವಿಷಯವನ್ನು  ಸಾಬೀತುಪಡಿಸುವ  ಮೂಲಕ ಖಾದಿಯಾನಿ ಆಶಯ ಸ್ವೀಕರಿಸಿದ ಕೆಲವರನ್ನು ಜಮಾಅತಿನಿಂದ ಹೊರಹಾಕುವಂತೆ ಮಾಡಿ  ಖಾದಿಯನಿಗಳು ಇಲ್ಲಿ  ನುಸುಳದಂತೆ ಸಮುದಾಯವನ್ನು ಕಾಪಾಡಿದ ಅಪೂರ್ವ ಘಟನೆಗಳನ್ನು ಶೈಖುನಾರವರು  ನಮ್ಮಲ್ಲಿ ಹಲವರಿಗೆ ವಿವರಿಸಿದ್ದಾರೆ.  

ಮರಣ ಹೊಂದುವ ಒಂದು ವಾರ  ಮುಂಚೆ ಶುಕ್ರವಾರದಂದು  ಜುಮಾ ನಮಾಜ್ ಬಳಿಕ ಜನರನ್ನು ಉದ್ದೇಶಿಸಿ ಮಾತನಾಡುತ್ತಾ *ನಮ್ಮೂರಲ್ಲಿ ಮಳೆ ಇಲ್ಲದೆ ಎಲ್ಲರೂ ಕಷ್ಟ ಅನುಭವಿಸುತ್ತಿದ್ದಾರೆ,*  ಆದುದರಿಂದ ಮಳೆ ಬರಲು ಪ್ರಾರ್ಥನೆ ನಡೆಸುವ ಮೊದಲು ಜನರಿಗೆ ತೌಬಾ ಹೇಳಿಕೊಟ್ಟು, ಮಳೆಗಾಗಿ ಭಕ್ತಿ ನಿರ್ಭರವಾಗಿ ದುಆ ಮಾಡಿದ್ದರು. ಶೈಖುನಾರವರ  ದುಆ ದ ಫಲವಾಗಿ ಅಂದು ರಾತ್ರಿ ಭಾರೀ ಮಳೆಯಾಗಿತ್ತು. 

ಮರಣ ಹೊಂದುದಕ್ಕೆ ಮೂರು  ದಿವಸಗಳ ಮೊದಲು ಮಿತ್ತಬೈಲಿನಲ್ಲಿ ಪ್ರತಿ ವರ್ಷ ನಡೆಯುವ ರಾತೀಬ್ ಹಾಗೂ ವಾರ್ಷಿಕ ಮಹಾ ಸಭೆಯಲ್ಲಿ  ಮಾಡಿದಂತಹ ಭಾಷಣದಲ್ಲಿ ಜಮಾಅತ್ತಿನ ಜನರೆಲ್ಲರನ್ನು ಸಾಕ್ಷಿ ನಿಲ್ಲಿಸಿ ಕೇಳಿದರು *"ನಾನು ಈ ಮಸೀದಿಯಲ್ಲಿ 40 ವರ್ಷ ಗಳ ಕಾಲ ಖತೀಬಾಗಿ ಸೇವೆ ಸಲ್ಲಿಸಿದ್ದೇನೆ, ಇದರೆಡೆಯಲ್ಲಿ ಯಾರಿಗಾದರೂ ಉಪಕಾರ ಮಾಡದಿದ್ದರೂ ಉಪದ್ರವನ್ನು ಮಾಡಿದ್ದೆಯಾ "?* ಇದಕ್ಕೆ ಉತ್ತರವಾಗಿ ಅಲ್ಲಿ ನೆರೆದಿರುವ ಎಲ್ಲರೂ ಒಂದೇ ಸ್ವರದಲ್ಲಿ "ಇಲ್ಲ" ಎಂದುತ್ತರಿಸಿದರು.  ಅದಕ್ಕೆ ಶೈಖುನಾ ಹೇಳಿದರು "ಹಾಗಾದರೆ ನೀವೆಲ್ಲರೂ ತಕ್ಬೀರ್ ಹೇಳಬೇಕು". ಸಭಿಕರು ಗೌರವದಿಂದ ತಕ್ಬೀರ್ ಹೇಳಿದರು ಆಗ ಶೈಖುನಾರವರು ಎಲ್ಲರಿಗೂ ದುಆ ಮಾಡಿ ಸಲಾಂ ಹೇಳಿ ಮನೆಗೆ ತೆರಳಿದರು. ಮನೆಗೆ ತೆರಳಿದ ಶೈಖುನಾರಿಗೆ ಎದೆ ನೋವು ಕಾಣಲಾರಂಭಿಸಿತು. ತಕ್ಷಣವೇ ಮಂಗಳೂರು ಹೈಲಾಂಡ್ ಆಸ್ಪತ್ರೆಗೆ ದಾಖಲಿಸಿದರು. ಮೂರು ದಿನ ಕಳೆದು ನಾಲ್ಕನೇ ದಿನ ಸೋಮವಾರ ರಾತ್ರಿ ಶೈಖುನಾರವರು ಈ ಲೋಕದಿಂದ ಕಣ್ಮರೆಯಾದರು.  

ಮಯ್ಯಿತ್ ನಮಾಜ್ ಗೆ  ಆತ್ರಾಡಿ ಖಾಝಿ ಶೈಖುನಾ ಅಲ್ ಹಾಜ್ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ನೇತೃತ್ವ ವಹಿಸಿದರು.  ಮಿತ್ತಬೈಲ್ ಜುಮಾ ಮಸೀದಿಯ ವಠಾರದಲ್ಲೇ  ದಫನ ಮಾಡಲಾಯಿತು. 

ಸೌಕರ್ಯ ಸೌಲಭ್ಯಗಳ  ಕೊರತೆ ಇದ್ದ ಆ ಕಾಲದ ಉಸ್ತಾದರು ದೀನಿಗಾಗಿ, ಮಸೀದಿ ಮತ್ತು ಮದರಸಗಳಿಗಾಗಿ ಸಹಿಸಿರುವ ಕಷ್ಟಗಳು ಅಪಾರವಾಗಿದೆ.ಆದ್ದರಿಂದ ಶೈಖುನಾರವರು ಮರಣ ಹೊಂದಿದ ಈ ತಿಂಗಳಲ್ಲಿ ಸಾಧ್ಯವಿದ್ದವರು ಯಾಸೀನ್ ಸೂರತ್ತನ್ನು ಅಥವಾ ಕನಿಷ್ಠ ಫಾತಿಹಾ ಸೂರತ್ತನ್ನಾದರೂ ಓದಿ ಮಹಾನರ ಸನ್ನಿಧಿಗೆ ಹದಿಯಾ ಮಾಡುವುದು ನಮ್ಮ ಕರ್ತವ್ಯವಾಗಿದೆ.

ಈಗ ಮಿತ್ತಬೈಲ್  ದರ್ಗಾದ  ಸಮೀಪ ಮೂರು ಮಹಾಪುರುಷರ ಮಕ್ಬರಗಳೂ ಕಾಣಲು ಸಾಧ್ಯ.  ಮಿತ್ತಬೈಲ್ ದರ್ಸಿನ್ ಸ್ಥಾಪಕರಾದ  *ಶೈಖುನಾ ಅಡ್ಯಾರ್ ಕಣ್ಣೂರ್ ಮುಹಮ್ಮದ್ ಹಾಜಿ(ಖ.ಸಿ), ಮಿತ್ತಬೈಲ್ ಖತೀಬ್ ಶೈಖುನಾ ಅಬ್ದುಲ್ಲಾಹ್ ಹಾಜಿ(ನ.ಮ) ಮತ್ತು ಮಿತ್ತಬೈಲ್ ಮುದರ್ರಿಸ್ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್(ನ.ಮ)*
 
ಅಲ್ಲಾಹು ನಮ್ಮೆಲ್ಲರನ್ನು ಆ ಮಹಾಪುರುಷರ ಜತೆ ಜನ್ನಾತುಲ್ ಫಿರ್ದೌಸ್ನಲ್ಲಿ  ಒಂದು ಗೂಡಿಸಲಿ.  ಆಮೀನ್.. 

✍️ *ಅಬೂ ತ್ವಲಾಲ್*